ಶಾಂತಿನಿಕೇತನ 	ಭಾರತದ ಪಶ್ಚಿಮ ಬಂಗಾಲದ ಬೀರ್‍ಭೂಮ್ ಜಿಲ್ಲೆಯ ಬಾಲ್‍ಪುರ್‍ನಲ್ಲಿರುವ ಒಂದು ಪ್ರಸಿದ್ಧ ಆಶ್ರಮ ಮತ್ತು ವಿಶ್ವವಿದ್ಯಾಲಯ. 1863 ರಲ್ಲಿ ರವೀಂದ್ರನಾಥ ಠಾಕೂರರ ತಂದೆ ಮಹರ್ಷಿ ದೇವೇಂದ್ರನಾಥ ಠಾಕೂರ್ ರಾಯಪುರದ ಜಮೀನ್ದಾರ ಭುವನ ಮೋಹನ ಸಿನ್ಹಾರಿಂದ 20 ಬಿಘ ಜಮೀನು ಕೊಂಡು ಈ ಆಶ್ರಮವನ್ನು ಸ್ಥಾಪಿಸಿದರು. ಇವರು 1888 ರಲ್ಲಿ ಶಾಂತಿನಿಕೇತನ ಟ್ರಸ್ಟನ್ನು ಸ್ಥಾಪಿಸಿ ಅಲ್ಲಿ ಅತಿಥಿಗೃಹ, ಪ್ರಾರ್ಥನಾಮಂದಿರ ಮತ್ತು ಧಾರ್ಮಿಕ ಸಾಹಿತ್ಯವನ್ನೊಳಗೊಂಡ ಒಂದು ಗ್ರ್ರಂಥಾಲಯವನ್ನು ಸ್ಥಾಪಿಸಿದರು. ಇಲ್ಲಿ ರವ್ರೀಂದ್ರನಾಥ ಠಾಕೂರರು ತಮ್ಮ ಬಾಲ್ಯ ಜೀವನ ಕಳೆದರು. 1901 ರಲ್ಲಿ ರವೀಂದ್ರನಾಥ ಠಾಕೂರ್ ಈ ಆಶ್ರಮದಲ್ಲಿ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದರು. ಶಿಕ್ಷಣ ಮತ್ತು ರಚನಾತ್ಮಕ ಕಾರ್ಯಗಳು ಗ್ರಾಮೀಣ ಭಾಗದಲ್ಲಿ  ಹೆಚ್ಚಾಗಬೇಕೆಂದು ಬಯಸಿದ ಇವರು ಈ ಶಾಲೆಯನ್ನು ಒಂದು ಆದರ್ಶ ಶಾಲೆಯಾಗಿ ಮಾಡಲು ಇಚ್ಛಿಸಿದರು. ಭಾರತೀಯ ಸಮಾಜದ ಮೇಲೆ ಇಂಗ್ಲಿಷ್ ಶಾಲೆಗಳ ಪ್ರಭಾವ ಹೆಚ್ಚಾಗತೊಡಗಿತ್ತು. ಈ ಆಶ್ರಮ ಶಾಲೆ ಭಾರತೀಯ ಸಂಸ್ಕøತಿ, ಸಮಾಜಗಳ ಬಗೆಗೆ ಹೆಚ್ಚು ಒತ್ತು ನೀಡಿತ್ತು.

	ಮಕ್ಕಳನ್ನು ಭೌತಿಕ ಪರಿಸರದಲ್ಲಿ ಬೆಳೆಸುವುದು, ಪ್ರಕೃತಿಯ ಜೊತೆ ಬೆರೆಯುವುದು, ನಗರ ಮತ್ತು ಗ್ರಾಮೀಣ ಪ್ರದೇಶದ ಶಿಕ್ಷಣವನ್ನು ವಿಶಾಲ ಪ್ರಪಂಚದೊಂದಿಗೆ ಹೊಂದಿಕೊಳ್ಳುವಂತೆ ಸಮಸ್ಥಿತಿಗೆ ತರುವ ಮೂರು ಗುರಿಗಳನ್ನು ಇದು ಹೊಂದಿತ್ತು. ಇದನ್ನು ಸ್ವದೇಶೀ ಚಳವಳಿಯ ಕಾಲದಲ್ಲಿ ಸ್ಥಾಪಿಸಲಾಗಿತ್ತು. ಇದು ಒಂದನೆಯ ಮಹಾಯುದ್ಧದ ವೇಳೆಗೆ ವಿಶ್ವಭಾರತಿಯಾಗಿ ಬೆಳೆಯಿತು. ವಿಶ್ವಭಾರತಿ ರವೀಂದ್ರರ ಶೈಕ್ಷಣಿಕ ಸಾಹಸದ ಪ್ರತೀಕವಾಗಿದೆ.  ಇದು ಕಾಲಕಾಲಕ್ಕೆ ಬೆಳೆಯುತ್ತ ಬಂದಿದೆ. ಶಾಂತಿನಿಕೇತನ ಆಶ್ರಮವಾಗಿ (1863), ಶಾಲೆಯಾಗಿ (1901) ಹಾಗೂ ವಿಶ್ವಭಾರತಿಯಾಗಿ (1921) ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.

 	ರವೀಂದ್ರರು 1916 ರಲ್ಲಿ ತಮ್ಮ ಮಗ ರತೀಂದ್ರನಾಥರಿಗೆ ಬರೆದ ಪತ್ರದಲ್ಲಿ ಶಾಂತಿನಿಕೇತನ ಶಾಲೆಯನ್ನು ಭಾರತವನ್ನು ಪ್ರಪಂಚದೊಂದಿಗೆ ಬೆಸೆಯುವ ದಾರವನ್ನಾಗಿ ಮಾಡಬೇಕೆಂದು ಹೇಳಿದ್ದಾರೆ. ಆಧ್ಯಾತ್ಮಿಕ, ಮಾನವಿಕ, ವೇದ, ಪುರಾಣ, ಬೌದ್ಧ, ಜೈನ, ಇಸ್ಲಾಮ್ ಮುಂತಾದ ಜ್ಞಾನಗಳಿಗೆ ಇದು ಕೇಂದ್ರವಾಗಿದೆ. ಇಲ್ಲಿನ  ಚಟುವಟಿಕೆಗಳು ಶ್ರೀನಿಕೇತನ ಮತ್ತು ಶಾಂತಿನಿಕೇತನ ಕೇಂದ್ರಗಳಿಂದ ನಡೆಯುತ್ತವೆ.  ಶಾಂತಿನಿಕೇತನ ಜ್ಞಾನಶಕ್ತಿಗೆ ಹೆಚ್ಚು ಒತ್ತು ನೀಡಿದರೆ ಶ್ರೀನಿಕೇತನ ಕ್ರಿಯಾಶಕ್ತಿಗೆ ಒತ್ತು ನೀಡಿದೆ. ಶ್ರೀನಿಕೇತನದಲ್ಲಿ ಅರ್ಥಶಾಸ್ತ್ರಜ್ಞರು, ಕೃಷಿ ತಜ್ಞರು ಸಮಾಜ ಸೇವಕರು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಗ್ರಾಮೀಣ ಶಿಕ್ಷಣ ಮತ್ತು ಕೈಗಾರಿಕೆಯ ವಿವಿಧ ಕ್ಷೇತ್ರದ ವಿಶೇಷ ತಜ್ಞರು ಗ್ರಾಮಗಳ ಸಮಸ್ಯೆಯನ್ನು ಬಗೆಹರಿಸಿ ಅದರ ಅಭಿವೃದ್ಧಿಗೆ ದುಡಿಯುತ್ತಾರೆ. ಇದು ಶ್ರೀನಿಕೇತನ ವಿಧಾನ ಸಂಶೋಧನಾ ವಿಭಾಗ ತೆರೆದಿದೆ. ಗ್ರಾಮದ ಯುವಕರಲ್ಲಿ ಸ್ವಾವಲಂಬನೆ ಬೆಳೆಸಲು ವೃತ್ತಿ ಬಾಲಕ ಸಂಘಟನಾ ಎಂಬ ಸ್ಕೌಟ್ ಚಳವಳಿಯನ್ನು ಆರಂಭಿಸಿತು. ಈ ಸಂಸ್ಥೆಗಳಲ್ಲಿ ವರ್ಗ, ಜಾತಿ, ಮತ, ದೇಶ, ಭಾಷೆಗಳ ತರತಮವಿಲ್ಲ. ವಿಶ್ವ ವ್ಯಾಪಕತ್ವ ಇದರ ವಿಶ್ವ ಭಾರತಿಯ ಧ್ಯೇಯ ವಾಕ್ಯ. ರವೀಂದ್ರನಾಥ ಠಾಕೂರರು ಬದುಕಿನ ಕೊನೆಯವರೆಗೂ ಇದರ ಆಚಾರ್ಯ (ಕುಲಪತಿ) ರಾಗಿದ್ದರು. ಅನಂತರ ಅವನೀಂದ್ರನಾಥ ಠಾಗೂರ್ ಮತ್ತು ಸರೋಜಿನಿ ನಾಯ್ಡು ಕ್ರಮವಾಗಿ ಆಚಾರ್ಯರಾದರು. ಶಿಕ್ಷಣದ ಮೂಲಕ ಭಾರತದ ಗುಲಾಮ ಗಿರಿಯನ್ನು ನಿವಾರಿಸಲು ಈ ಸಂಸ್ಥೆ ಪ್ರಯತ್ನಿಸಿತು.

	ಇದರ ಸ್ಥಾಪನೆಯ ಪ್ರಾರಂಭದ ವರ್ಷಗಳಲ್ಲಿ ಪ್ರಮುಖ ಯುರೋಪಿಯನ್ ವಿದ್ವಾಂಸರಾದ ಸೆಲ್ಪಿನ್ ಲೆವಿ, ಸ್ಟೆನ್‍ಕೊನೋಟುಸಿ, ಕಾಲಿನ್ಸ್, ವಾಗ್ಡೊನೋವ್, ಅಂಡ್ರೇ ಕಾರ್ಪೆಲೆಸ್, ಸ್ಟೆಲ್ಲಾ ಕ್ರಾಮ್‍ರಿಸ್ಟ್, ಲಿಯೋನಾರ್ಡ್ ಎಮ್‍ಹಸ್ರ್ಟ್ ಮೊದಲಾದವರು ಗ್ರಾಮೀಣ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಿದರು.

	1936ರಲ್ಲಿ ಲೋಕಶಿಕ್ಷಾ (ಮಾಹಿತಿ ಶಿಕ್ಷಣ), 1938ರಲ್ಲಿ ಶಿಲ್ಪಸದನ ಗಳು (ಕಲಾಸಂಸ್ಥೆ) ಸ್ಥಾಪನೆಯಾದುವು. ಇಲ್ಲಿ ಪಾಠಭವನ (ಶಾಲೆ), ಶಿಕ್ಷಾ ಭವನ (ಕಾಲೇಜು), ವಿದ್ಯಾಭವನ, (ಸ್ನಾತಕೋತ್ತರ ಮತ್ತು ಸಂಶೋಧನೆ), ಕಲಾಭವನ,  ಸಂಗೀತ ಭವನ, ಪಳ್ಳಿ ಸಂಘಟನ (ಗ್ರಾಮೀಣ ಸಂಘಟನೆ), ಹಿಂದೀ ಭವನ ಮತ್ತು ಗ್ರಂಥನ (ಪ್ರಕಾಶನ) ವಿಭಾಗಗಳಿವೆ. 1937 ರಲ್ಲಿ ಚಿನ್ ಭವನ (ಚೀನ-ಭಾರತ ಅಧ್ಯಯನ) ಕೇಂದ್ರವನ್ನು ಸ್ಥಾಪಿಸಲಾಯಿತು. ರವೀಂದ್ರ ಭವನ (1942) ರವೀಂದ್ರನಾಥರ ಸಾಹಿತ್ಯ ಮತ್ತು ತತ್ತ್ವಶಾಸ್ತ್ರ ಅಧ್ಯಯನ ಮಾಡುತ್ತದೆ. ರವೀಂದ್ರರ ನಿಧನದ ಅನಂತರ (1941) ವಿಶ್ವಭಾರತಿ ಕೇಂದ್ರ ಸರ್ಕಾರದ ಅನುದಾನ ಪಡೆಯಿತಲ್ಲದೆ ಕೇಂದ್ರೀಯ ವಿಶ್ವವಿದ್ಯಾಲಯವಾಯಿತು. ಪ್ರಾರಂಭದಲ್ಲಿ ಇದು ಪದವಿಗಳನ್ನು ನೀಡುತ್ತಿರಲಿಲ್ಲ. ಈಗ ಇದು ಪದವಿ ನೀಡುವ ಸಂಸ್ಥೆಯಾಗಿದೆ.

	ರವೀಂದ್ರರು ಈ ಶಾಲೆಯನ್ನು 5 ಹುಡುಗರೊಂದಿಗೆ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದರು. ಅದಕ್ಕೆ ಅವರ ಪತ್ನಿ ಮೃಣಾಲಿನಿ ದೇವಿಯವರ ಒಡವೆಗಳನ್ನೂ ತಮ್ಮ ಬಂಗಲೆಯನ್ನೂ ಮಾರಬೇಕಾಯಿತು. ನೊಬೆಲ್ ಪ್ರಶಸ್ತಿಯಿಂದ ಬಂದ ಸಂಪೂರ್ಣ ಹಣವನ್ನು ಅವರು ಇದರ ಅಭಿವೃದ್ಧಿಗೆ ನೀಡಿದರು. ವಿಶ್ವಭಾರತಿಗೆ ಅನೇಕರು ಸಹಾಯ ಮಾಡಿದ್ದಾರೆ. ಅವರಲ್ಲಿ ತ್ರಿಪುರ, ಬರೋಡ, ಜೈಪುರ, ಕಾಥೇವಾಡ, ಪೋರಬಂದರ್, ಲಿಮ್ಡಿ, ಅವಾಘರ್, ಹೈದರಾಬಾದ್‍ನ ರಾಜರು ಮತ್ತು ರತನ್ ಟಾಟಾ ಮುಖ್ಯರು. ಇಂಗ್ಲೆಂಡಿನ ಡಬ್ಲ್ಯೂ.ಡಬ್ಲ್ಯೂ. ಪಿಯರ್‍ಸನ್, ಸಿ.ಎಫ್. ಅಂಡ್ರೊಸ್ ರಂಥ ವಿದೇಶಿ ಯರೂ ಕೊಡುಗೆ ನೀಡಿದರು. ಅಮೆರಿಕದ ಡೊರೊಥಿ ಎಮ್‍ಹಸ್ರ್ಟ್ ಸ್ಟ್ರೈಟ್ ಮತ್ತು ಇಂಗ್ಲೆಂಡಿನ ಲಿಯೋನಾರ್ಡ್ ಎಮ್‍ಹಸ್ರ್ಟ್ ಇದರ ಅಭಿವೃದ್ಧಿಗೆ ದತ್ತಿಗಳನ್ನು ನೀಡಿದರು.

	ಪ್ರಸ್ತುತ ಇದರಲ್ಲಿ ಶಾಂತಿನಿಕೇತನ, ಶ್ರೀನಿಕೇತನ ಕೇಂದ್ರಗಳಿವೆ. ಶಾಂತಿ ನಿಕೇತನದಲ್ಲಿ ಬಯಲು ತರಗತಿಗಳು ನಡೆಯುತ್ತವೆ. ಹಬ್ಬಗಳ ಆಚರಣೆ, ಪ್ರಾರ್ಥನೆ, ಸಂಗೀತಗಳು ನಡೆಯುತ್ತವೆ. ಶ್ರೀನಿಕೇತನದಲ್ಲಿ ಗ್ರಾಮೀಣ ವಿಸ್ತರಣೆ, ಕೃಷಿ ತರಬೇತಿ, ಗ್ರಾಮೀಣ ಮಕ್ಕಳಿಗೆ ಶಿಕ್ಷಾಶಾಸ್ತ್ರ ಶಾಲೆಗಳು ನಡೆಯುತ್ತವೆ. ಇದೊಂದು ಅಪೂರ್ವ ಶಿಕ್ಷಣ ಕೇಂದ್ರವೆಂದು ಹೆಸರಾಗಿದೆ.		
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ